ಸೋಮೇಶ್ವರ 4

	ಕಲ್ಯಾಣದ ಚಾಳುಕ್ಯ ವಂಶದ ಕೊನೆಯ ದೊರೆ (1182-89). ವೀರಸೋಮೇಶ್ವರ, ತ್ರಿಭುವನಮಲ್ಲ, ವೀರ ನಾರಾಯಣ ಮುಂತಾದ ಬಿರುದುಗಳಿದ್ದ ಈತ 3ನೆಯ ತೈಲಪನ ಮಗ. ತನ್ನ ತಂದೆಯ ಕಾಲದಲ್ಲಿ ಚಿನ್ನತುಂಬಲ ರಾಜಧಾನಿಯಲ್ಲಿ ಮಹಾಮಂಡಲೇಶ್ವರ ನಾಗಿದ್ದ.

	ಸು. 1162ರಲ್ಲಿ 3ನೆಯ ತೈಲಪನನ್ನು ಕೊನೆಗಾಣಿಸಿ ಕಳಚುರಿಗಳು ಚಾಳುಕ್ಯರ ರಾಜ್ಯವನ್ನು ಆಕ್ರಮಿಸಿಕೊಂಡರು. ಸು. 1182ರ ವರೆಗೆ ಸೋಮೇಶ್ವರ ಅಜ್ಞಾತವಾಸದಲ್ಲಿದ್ದ. ಆ ಹೊತ್ತಿಗೆ ಕಳಚುರಿಗಳ ಬಲ ಕುಂದುತ್ತಿದ್ದು, ದಂಡನಾಯಕ ಬಮ್ಮ, ತೇಜಿಮಯ್ಯ, ಶ್ರೀಧರ ಮುಂತಾದವರು ಚಾಳುಕ್ಯರ ಆಳಿಕೆಯನ್ನು ಪುನರ್‍ಸ್ಥಾಪಿಸಲು ಯತ್ನಿಸಿ ಸಫಲರಾದರು. ಬಮ್ಮ ಚಾಳುಕ್ಯರಾಜ್ಯಪ್ರತಿಷ್ಠಾಪಕ, ಕಲಚುರಿಕುಲಕಾಲಾಗ್ನಿ ಇತ್ಯಾದಿ ಬಿರುದುಗಳನ್ನು ಗಳಿಸಿದ. ಚಾಳುಕ್ಯ ರಾಜ್ಯ ಸೋಮೇಶ್ವರನ ವಶಕ್ಕೆ ಬಂದಿತಾದರೂ ಇವನ ಅಧಿಕಾರ ರಾಜ್ಯದ ದಕ್ಷಿಣಭಾಗಕ್ಕಷ್ಟೇ ಸೀಮಿತವಾಗಿತ್ತು. ಉತ್ತರದಲ್ಲಿ ಸೇವುಣರೂ ದಕ್ಷಿಣದಲ್ಲಿ ಹೊಯ್ಸಳರೂ ಬಹು ಪ್ರಬಲರಾಗಿದ್ದರು. ಸೋಮೇಶ್ವರನಿಗೆ ಸಾಕಷ್ಟು ಜನ ಹಾಗೂ ಧನ ಬೆಂಬಲವಿಲ್ಲವೆಂದರಿತ ಈ ರಾಜಕೀಯ ಶಕ್ತಿಗಳು ಕೆಲವೇ ವರ್ಷಗಳಲ್ಲಿ ಇವನ ಆಳಿಕೆಯನ್ನು ಕೊನೆಗಾಣಿಸಿದವು. ಸು. 1189ರ ಹೊತ್ತಿಗೆ ದೇವಗಿರಿಯ ಯಾದವ ಭಿಲ್ಲಮ ಚಾಳುಕ್ಯ ರಾಜ್ಯದ ಉತ್ತರ ಮತ್ತು ಪೂರ್ವ ಭಾಗಗಳನ್ನು ವಶಪಡಿಸಿಕೊಂಡ. ಇದೇ ಸಮಯದಲ್ಲಿ ಹೊಯ್ಸಳರ ದೊರೆಯಾದ ಇಮ್ಮಡಿ ವೀರಬಲ್ಲಾಳ ಸೋಮೇಶ್ವರನ ಪ್ರಸಿದ್ಧ ದಂಡನಾಯಕನಾದ ಬಮ್ಮರಸನನ್ನು ಸೋಲಿಸಿ ಚಾಳುಕ್ಯ ಸಾಮ್ರಾಜ್ಯದ ದಕ್ಷಿಣ ಭಾಗವನ್ನು ಸ್ವಾಧೀನಪಡಿಸಿಕೊಂಡ. 1189ರ ಹೊತ್ತಿಗೆ ಚಾಳುಕ್ಯ ರಾಜ್ಯ ನಿರ್ಮೂಲವಾಯಿತು. ಗೋವೆಯ ಕದಂಬರು ಮುಂದೆ ಕೆಲವು ವರ್ಷಗಳ ಕಾಲ ಚಾಳುಕ್ಯ ಸಾಮಂತರೆಂದು ಕರೆದುಕೊಂಡರೂ ಅದು ಕೇವಲ ಸ್ವಾಮಿನಿಷ್ಠೆಯೆಂದಷ್ಟೇ ತೋರುತ್ತದೆ. ಇತ್ತೀಚೆಗೆ ದೊರೆತ ಒಂದು ಶಾಸನ, ಸೋಮೇಶ್ವರ 1215ರ ವರೆಗೂ ಇದ್ದನೆಂಬುದನ್ನು ತೋರಿಸಿದೆ. ಆದರೆ ವಿವರಗಳು ದೊರಕುವುದಿಲ್ಲ.		
											(ಟಿ.ಎಸ್.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ